ಧರ್ಮಸ್ಥಳ, ಮಾ. 25 : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಮುಖ ಕಾರ್ಯಕ್ರಮಗಳಳ್ಳೊಂದಾದ ಮದ್ಯವರ್ಜನ ಶಿಬಿರಗಳನ್ನು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಾಡಲಾಗುತ್ತದೆ. ವಿಶೇಷವಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ತಿಂಗಳಿಗೆರಡರಂತೆ ವಿಶೇಷ ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಇದರ 132ನೇ ಶಿಬಿರವನ್ನು 8 ದಿನಗಳ ಕಾಲ ಯಶಸ್ವಿಯಾಗಿ ನಡೆಸಿ ರಾಜ್ಯದ ವಿವಿಧೆಡೆಗಳಿಂದ ಬಂದಿರುವ 90 ಮದ್ಯವ್ಯಸನಿಗಳಿಗೆ ಮನೋ ವೈದ್ಯಕೀಯ ಚಿಕಿತ್ಸೆ ಮತ್ತು ಆಪ್ತಸಲಹೆಯೊಂದಿಗೆ ಪ್ರೇರಣೆ ನೀಡಿ ಕುಟುಂಬದವರ ಭಾಗವಹಿಸುವಿಕೆಯಲ್ಲಿ ಕುಟುಂಬ ದಿನವನ್ನು ಏರ್ಪಡಿಸಿ ಶ್ರೀ ಧರ್ಮಸ್ಥಳದ ವಸಂತ ಮಹಲ್‍ನಲ್ಲಿ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಭಾಗವಹಿಸಿ “ ಯೋಗ, ಅದೃಷ್ಟ ಬದಲಾವಣೆ, ಪರಿವರ್ತನೆಗೆ ಒಳಪಟ್ಟ ಮದ್ಯವ್ಯಸನಿಗಳು ಮುಂದಿನ ದಿನಗಳಲ್ಲಿ ಸ್ನೇಹಿತರ ಒತ್ತಡಕ್ಕೆ ಬಲಿಯಾಗದೆ ಕೀಳರಿಮೆಯನ್ನು ಬಿಟ್ಟು, ಸೇಡು ತೀರಿಸಿಕೊಳ್ಳದೆ, ಸಜ್ಜನರ ಸಹವಾಸದೊಂದಿಗೆ ಕಠಿಣ ಪರಿಶ್ರಮದಿಂದ ಬದುಕು ರೂಪಿಸಬೇಕೆಂದರು. ಸಾಂಸಾರಿಕ, ವ್ಯಾವಹಾರಿಕ, ಆರ್ಥಿಕ ಅಡಚಣೆಗಳು ಸ್ವಾಭಾವಿಕವಾಗಿ ಮನುಷ್ಯನನ್ನು ಬಹಳ ಗೊಂದಲಕ್ಕೀಡು ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಗಟ್ಟಿ ಮನಸ್ಸು ಮಾಡಿ ಮತಿಭ್ರಷ್ಠರಾಗದಂತೆ ವ್ಯಕ್ತಿತ್ವ ರೂಪಿಸುವುದು ಅತ್ಯವಶ್ಯವಾಗಿದೆ. “ಒಬ್ಬ ಶ್ರೀಮಂತ ಮನೆತನದ ವ್ಯಕ್ತಿ ನನ್ನನ್ನು ಭೇಟಿಯಾಗಿದ್ದರು. ಇವರ ಶ್ರೀಮಂತಿಕೆ ಎಷ್ಟಿತ್ತು ಎಂದರೆ ದಿನಾ ಏಳೆಂಟು ಕೋಟಿಯ ವ್ಯವಹಾರ ಮಾಡಬಲ್ಲವರು. ದಾನ ಧರ್ಮ, ದೇವಸ್ಥಾನಗಳಿಗೆ ಕೋಟಿ ಹಣವನ್ನು ನೀಡುವವರು. ಅವರ ಸುಪುತ್ರಿಯನ್ನು ಶ್ರೀಮಂತ ಕುಟುಂಬಕ್ಕೆ ಮದುವೆ ಮಾಡಿ ಕೊಟ್ಟಿದ್ದರು. ಮದುವೆಯಾದ ಅಳಿಯ ಡ್ರಗ್ಸ್ ಚಟದಲ್ಲಿರುವ ವಿಷಯ ಗೊತ್ತಾಗಲೇ ಇಲ್ಲ. ಕೊನೆಗೆ ಡ್ರಗ್ಸ್‍ಗಾಗಿಯೇ ಆತ್ಮಹತ್ಯೆ ಮಾಡಿಕೊಂಡರು. ಒಂದು ದೋಷಕ್ಕಾಗಿ ಸಾವಿರ ಒಳ್ಳೆತನಗಳನ್ನು ನಾಶ ಮಾಡಬೇಕಾಗಿ ಬಂತು” ಎಂದು ಮಾಹಿತಿ ನೀಡಿದರು. ಬಳಿಕ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಹೆಚ್. ಮಂಜುನಾಥ್ ಮಾತನಾಡಿ, “ವ್ಯಸನ ಜಟಿಲವಾಗಿ ಬಾಧಿಸುವ ಸಮಸ್ಯೆ. ಮನುಕುಲದ ಯಕ್ಷಪ್ರಶ್ನೆ. ಅಷ್ಟದಿಕ್ಕಿನಲ್ಲಿ ನೋಡಿದರೂ ಇದು ಯಾವುದೇ ಸಂತೋಷ ಕೊಡುವ ವಸ್ತು ಅಲ್ಲ. ಕಾಮನಬಿಲ್ಲು ತಲುಪಲು ಅಸಾಧ್ಯ. ಅಂತೆಯೇ ಕುಡಿತ, ವ್ಯಸನವೂ ಒಂದು ಮಾಯಾಜಾಲದಂತೆ ಭ್ರಮೆ ಹುಟ್ಟಿಸುವಂತಹದ್ದಾಗಿರುತ್ತದೆ. ಮಲಮೂತ್ರಕ್ಕೆ ನಾವು ಕೊಡುವ ಸ್ಥಾನವನ್ನೇ ಶರಾಬಿಗೆ ಕೊಟ್ಟಾಗ ಇದರಿಂದ ದೂರ ಸರಿಯಲು ಸುಲಭ. ಮನಸ್ಸು ಕೆಡಿಸುವ ವೈರಸ್ ಮದ್ಯಪಾನ. ಇದಕ್ಕೆ ಆಂಟಿವೈರಸೇ ದೇವರ ಧ್ಯಾನ” ಎಂದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾೈಸ್ ಯೋಜನಾಧಿಕಾರಿಗಳಾದ ಶ್ರೀ ತಿಮ್ಮಯ್ಯ ನಾಯ್ಕ, ಶ್ರೀ ಗಣೇಶ್ ಆಚಾರ್ಯ, ಶಿಬಿರಾಧಿಕಾರಿಗಳಾದ ಶ್ರೀ ನಾಗೇಶ್ ಎನ್.ಪಿ, ಶ್ರೀ ನಾಗರಾಜ್, ಆರೋಗ್ಯ ಸಹಾಯಕಿಯರಾದ ಶ್ರೀಮತಿ ಸೌಮ್ಯ, ಕುಮಾರಿ ರಂಜಿತಾ ಉಪಸ್ಥಿತರಿದ್ದರು. ಮುಂದಿನ ವಿಶೇಷ ಶಿಬಿರವು ದಿನಾಂಕ:01.04.2019 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

ಒಂದು ದೋಷದಿಂದ ಸಾವಿರ ಒಳ್ಳೆ ಗುಣಗಳ ನಾಶವಾಗುತ್ತದೆ – ಡಾ| ಡಿ. ವೀರೇಂದ್ರ ಹೆಗ್ಗಡೆಯವರು
Tagged on:                 

Leave a Reply

Your email address will not be published. Required fields are marked *